ಕಾಂಗ್ರೆಸ್ ಪಕ್ಷದ ಸ್ತ್ರೀವಿರೋಧಿ ಮನಸ್ಥಿತಿ: ಮಾಳವಿಕಾ ಅವಿನಾಶ್

ವಾರ್ತಾಜಾಲ
By -
0

ಬೆಂಗಳೂರು: ಶಾಮನೂರು ಶಿವಶಂಕರಪ್ಪ, ಸುಪ್ರಿಯಾ ಶ್ರೀನಾತೆ ಅವರ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಸ್ತ್ರೀ ವಿರೋಧಿ ಮನಸ್ಥಿತಿಯನ್ನು ಅಭಿವ್ಯಕ್ತಿಗೊಳಿಸುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕಾ ಅವಿನಾಶ್ ಅವರು ತಿಳಿಸಿದರು.

ಹೋಟೆಲ್ “ಜಿ.ಎಂ. ರಿಜಾಯ್ಸ್” ನ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದಲ್ಲಿ ಇಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಶಾಮನೂರು ಶಿವಶಂಕರಪ್ಪ ಅವರು ‘ಮಹಿಳೆಯರು ಮನೆಯಲ್ಲಿರಲು ಮಾತ್ರ ಲಾಯಕ್ಕು’ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಅತ್ಯಂತ ವಿಷಾದನೀಯ ಎಂದು ತಿಳಿಸಿದರು.

ಶಾಮನೂರು ಅವರ ಪಕ್ಷದ ಅಧ್ಯಕ್ಷೆ ಸ್ವತಃ ಒಬ್ಬ ಮಹಿಳೆ. ಹಿಂದೆ ಅವರ ಪಕ್ಷದ ಮಹಿಳೆ ಈ ರಾಷ್ಟ್ರದ ಪ್ರಧಾನಿ ಆಗಿದ್ದರು. ಈಗ ಆ ಪಕ್ಷದಲ್ಲಿ ಪ್ರಿಯಾಂಕ ವಾಧ್ರಾ ಮತ್ತು ಸೋನಿಯಾ ಗಾಂಧಿಯವರು ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಹೀಗಿರುವಾಗ ಮತ್ತೊಂದು ಪಕ್ಷದ ಅಭ್ಯರ್ಥಿ ಬಗ್ಗೆ ಅಗೌರವದ ಮಾತನಾಡುವುದು ಖಂಡನೀಯ ಎಂದರಲ್ಲದೆ, ಗಾಯತ್ರಿ ಸಿದ್ದೇಶ್ವರ್ ಅವರು, ನಾನು ಅವರ ಜೊತೆ ಪ್ರವಾಸ ಮಾಡಿದಾಗ ಒಂದು ಮಾತು ಹೇಳಿದ್ದರು. ‘ಇದುವರೆಗೆ ಮನೆಯ ಆಡಳಿತ- ನಿರ್ವಹಣೆಯನ್ನು ನಾನು ಮಾಡುತ್ತಿದ್ದೆ. ಇನ್ನು ಮುಂದೆ ಕ್ಷೇತ್ರದ ನಿರ್ವಹಣೆ ಮಾಡಲಿದ್ದೇನೆ’ ಎಂದಿದ್ದರು. ಕ್ಷೇತ್ರದ ಜನರೆಲ್ಲರೂ ಒಂದು ಕುಟುಂಬದ ರೀತಿ ಎಂಬಂಥ ಹೇಳಿಕೆ ಇದಾಗಿತ್ತು ಎಂದು ತಿಳಿಸಿದರು.

ಈ ಮಾತುಗಳನ್ನು ಆಡುವ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಆ ಕ್ಷೇತ್ರದ ಜನರು ಮನ್ನಣೆ ನೀಡುವರೆಂಬ ಹಾಗೂ ಜಯಶಾಲಿ ಮಾಡಿ ಲೋಕಸಭೆಗೆ ಕಳಿಸಿಕೊಡುವರೆಂಬ ನಂಬಿಕೆ ಬಿಜೆಪಿಗೆ ಇದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಸ್ತ್ರೀಯರನ್ನು ಪ್ರತ್ಯೇಕವಾಗಿ ಗುರುತು ಮಾಡಿಕೊಂಡು ಆರ್ಥಿಕ- ಸಾಮಾಜಿಕವಾಗಿ ಸಶಕ್ತ ಮಾಡಲು ಅನೇಕ ಯೋಜನೆಗಳನ್ನು ಕಳೆದ 10 ವರ್ಷಗಳಲ್ಲಿ ಜಾರಿಗೊಳಿಸಿದ್ದಾರೆ. ಹೆಣ್ಮಕ್ಕಳಿಗೆ ಅನುಕೂಲವಾಗಲೆಂದು ಮೋದಿ ಜೀ ಅವರು ಜನ್ ಧನ್, ಸ್ವಚ್ಛ ಭಾರತ್ ಮತ್ತಿತರ ನೂರಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಪರಿಶ್ರಮ ಪಡುತ್ತಿದ್ದಾರೆ ಎಂದು ವಿವರಿಸಿದರು.

ರಾಜಕೀಯ ಸಶಕ್ತೀಕರಣಕ್ಕಾಗಿ ನಾರಿ ಶಕ್ತಿ ವಂದನ್ ಕಾಯ್ದೆಯನ್ನು ಜಾರಿಗೊಳಿಸಿ ಶೇ 33ರಷ್ಟು ಮೀಸಲಾತಿಯನ್ನು ಕಲ್ಪಿಸಿದ್ದಾರೆ. ಕಾಂಗ್ರೆಸ್ಸಿನ ಐ.ಟಿ ಸೆಲ್‍ನ ಸುಪ್ರಿಯಾ ಶ್ರೀನಾತೆ ಎಂಬವರು ನಮ್ಮ ಪಕ್ಷದ ಇನ್ನೊಬ್ಬ ಅಭ್ಯರ್ಥಿ ಕಂಗನಾ ರಣಾವತ್ ಕುರಿತು ಅತ್ಯಂತ ಕೀಳುಮಟ್ಟದ ಭಾಷೆಯಲ್ಲಿ ಫೇಸ್ ಬುಕ್, ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ದೇಶಾದ್ಯಂತ ವಿರೋಧ ವ್ಯಕ್ತವಾದಾಗ ಅದನ್ನು ನಾನು ಮಾಡಿಲ್ಲ ಎಂದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು ಎಂದು ಆಕ್ಷೇಪಿಸಿದರು. 


Post a Comment

0Comments

Post a Comment (0)