ಮೌಢ್ಯ, ಮೂಢನಂಬಿಕೆಗಳನ್ನು ತಡೆಯುವ ಕಾನೂನು ಅನುಷ್ಠಾನಕ್ಕೆ ರಾಜಕೀಯ ಇಚ್ಛಾಶಕ್ತಿ ಬಹಳ ಮುಖ್ಯ: ಸಚಿವ ಸತೀಶ್ ಜಾರಕಿಹೊಳಿ

ವಾರ್ತಾಜಾಲ
By -
0

 • ಬೆಂಗಳೂರು: ಮೌಢ್ಯ ಮತ್ತು ಮೂಢನಂಬಿಕೆಗಳನ್ನು ತಡೆಯುವ ಕಾನೂನು ಇದ್ದರೂ ಅದನ್ನು ಪರಿಣಾಮಕಾರಿ ಅನುಷ್ಠಾನ ಮಾಡಲು ರಾಜಕೀಯ ಇಚ್ಛಾಶಕ್ತಿ ಅಗತ್ಯವಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
 • ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯೂಡಬ್ಲ್ಯೂಜೆ) ಹಮ್ಮಿಕೊಂಡ ’ಮೌಢ್ಯ-ಮೂಢನಂಬಿಕೆ ಮತ್ತು ಮಾಧ್ಯಮ’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ವಿಚಾರಧಾರೆಗಳ ಅಧ್ಯಯನ ಮೂಲಕ ವೈಚಾರಿಕತೆ ಬೆಳೆಸಿಕೊಂಡವರ ಮೇಲೆ ಯಾರೂ ಸವಾರಿ ಮಾಡಲು ಸಾಧ್ಯವಿಲ್ಲ ಎಂದರು.


 • ಸರ್ಕಾರ ಯಾವುದೇ ಕಾನೂನು ರೂಪಿಸಿದರೂ, ಅದನ್ನು ಅನುಷ್ಠನಕ್ಕೆ ತರುವುದು ಕಾರ್ಯಾಂಗ. ಮೂಢನಂಬಿಕೆಗಳನ್ನು ತಡೆಯಲು ಹೊಸ ಕಾನೂನು ರೂಪಿಸುವ ಅಗತ್ಯವಿಲ್ಲ. ಇದು ಮುಖ್ಯಮಂತ್ರಿಯೊಬ್ಬರಿಂದ ಆಗವಂತದ್ದಲ್ಲ. ಶಾಸಕರು, ಸಚಿವರು ಸೇರಿದಂತೆ ಎಲ್ಲರೂ ಇಚ್ಛಾಶಕ್ತಿಯಿಂದ ಕೈಜೋಡಿಸಿದರೆ, ಎಲ್ಲವೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯವಾಗುತ್ತದೆ. ಆದರೆ, ಅಂಥಹ ವಾತಾವರಣ ಇನ್ನೂ ನಮ್ಮಲ್ಲಿ ನಿರ್ಮಾಣವಾಗಿಲ್ಲ ಎಂದರು.
 • ಅಂಬೇಡ್ಕರ್, ಬುದ್ಧ, ಬಸವಣ ಅವರ ವಿಚಾರಧಾರೆಗಳು ನಮಗೆ ಬೆಳಕಾಗಬೇಕು. ಆ ಆದರ್ಶದ ಬೆಳಕಿನಲ್ಲಿ ಉತ್ತಮ ಸಮಾಜ ನಿರ್ಮಾಣ ಕಟ್ಟುವುದು ನಮ್ಮ ಕನಸಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮವೂ ಸಕ್ರಿಯವಾಗಿ ಕೈ ಜೋಡಿಸಿದರೆ ಸಮಾಜವನ್ನು ಮೌಢ್ಯ ಮುಕ್ತ ಮಾಡಲು ಸುಲಭ ಸಾಧ್ಯ ಎಂದು ಜಾರಕಿಹೊಳಿ ತಿಳಿಸಿದರು.
 • ಮೌಢ್ಯವನ್ನು ತೊಲಗಿಸಲು ಮಾಧ್ಯಮದ ಪಾತ್ರ ಬಹುಮುಖ್ಯ. ಮೌಢ್ಯ, ಮೂಢನಂಬಿಕೆಯನ್ನು ದೂರ ಮಾಡಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಮಾನವ ಬಂಧುತ್ವ ವೇದಿಕೆ ಮೂಲಕ  ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.


 • ದೆವ್ವವೂ ಇಲ್ಲ, ಪಿಶಾಚಿನೂ ಇಲ್ಲ
 • ನಾನು ಹಲವಾರು ಕೆಲಸಗಳನ್ನು ಸ್ಮಶಾನದಿಂದಲೇ ಪ್ರಾರಂಭಿಸಿದ್ದೇನೆ. ಸ್ಮಶಾನ ಎನ್ನುವುದು ಭಯ ಹುಟ್ಟಿಸುತ್ತದೆ ಎನ್ನುವುದು ಅವರವರ ನಂಬಿಕೆ. ಅಲ್ಲಿ ದೆವ್ವವೂ ಇಲ್ಲ, ಪಿಶಾಚಿನೂ ಇಲ್ಲ. ಎಲ್ಲವೂ ನಮ್ಮ ಮನೋ ಕಲ್ಪನೆ. ಒಳ್ಳೆಯ ಕೆಲಸ ಮಾಡಬೇಕು ಎನ್ನುವ ಇಚ್ಛಾಶಕ್ತಿ ಇದ್ದರೆ ಅದಕ್ಕೆ ಜಾಗ, ಘಳಿಗೆ ಮುಖ್ಯವಾಗುವುದಿಲ್ಲ ಎಂದರು.

 • ಸಾವಿರ ಕೋಟಿ ಬಿಡುಗಡೆ, 1500 ನೇಮಕ
 • ಲೋಕೋಪಯೋಗಿ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, ಪಾರದರ್ಶಕತೆಗೆ ಆದ್ಯತೆ ನೀಡಲಾಗಿದೆ. ಬಾಕಿ ಇದ್ದ 1 ಸಾವಿರ ಕೋಟಿ ಬಿಲ್ ಬಿಡುಗಡೆ ಮಾಡಲಾಗಿದೆ. ಪ್ರತಿ 20 ಕಿ.ಮೀ.ಗೆ ಒಬ್ಬರಂತೆ ಒಟ್ಟು 1500 ಜನರನ್ನು ರಸ್ತೆ ನಿರ್ವಹಣೆ ನೋಡಿಕೊಳ್ಳಲು ನೇಮಕ ಮಾಡಿಕೊಳ್ಳಲಾಗುವುದು. ಇಂಜಿನೀಯರ್‌ಗಳಿಗೆ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದರು.
 • ಮೂಢನಂಬಿಕೆ ವಿರುದ್ದದ ಧ್ವನಿ
 • ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಮೂಡನಂಬಿಕೆಯ ವಿರುದ್ಧ ಸದಾ ಧ್ವನಿ ಎತ್ತುತ್ತಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ನಡೆ ನಿಜಕ್ಕೂ ಶ್ಲಾಘನೀಯ. ಎಲ್ಲರಿಗಿಂತಲೂ ವಿಭಿನ್ನ ರಾಜಕಾರಿಣಿ ಆಗಿದ್ದರೂ, ಈತನಕ ತಾವು ನಂಬಿದ ನೆಲೆಯಲ್ಲಿಯೇ ಹೆಜ್ಜೆ ಇಡುತ್ತಿರುವುದು ವಿಶೇಷವಾದದ್ದು ಎಂದರು.

 • ಕೆಯುಡಬ್ಲೂೃಜೆ ಭವನಕ್ಕೆ ನೆರವು
 • ಬೆಂಗಳೂರಿನಲ್ಲಿ ಕೆಯುಡಬ್ಲೂೃಜೆ ನಿರ್ಮಾಣ ಮಾಡಲಿರುವ ಪತ್ರರ್ಕರ ಭವನಕ್ಕೆ ಲೋಕೋಪಯೋಗಿ ಇಲಾಖೆಯ ಮೂಲಕ ನೆರವು ನೀಡಲಾಗುವುದು. ಈಗಿರುವ ಕಚೇರಿ ಮತ್ತು ಸಭಾಂಗಣ ನವೀಕರಣ ಮಾಡಲು ಕೂಡಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಭರವಸೆ ನೀಡಿದರು.

 • ಶ್ರದ್ದಾಂಜಲಿ
 • ಸಭೆಗೆ ಮುನ್ನ ನಮ್ಮನ್ನಗಲಿದ ಹಿರಿಯ ಪತ್ರಕರ್ತರಾದ ಬಾಗಲಕೋಟೆಯ ರಾಮಮನಗೂಳಿ, ಮಂಗಳೂರಿನ ವಿ.ಮನೋಹರ ಪ್ರಸಾದ್, ಗದಗದ ದಿಲೀಪಕುಮಾರ ಜೋಷಿ, ಪತ್ರಿಕಾ ವಿತರಕರ ವಿಭಾಗದ ಕೊಪ್ಪಳದ ಮಂಜುನಾಥ ದಂಡಿನ ಅವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಹಾಜರಿದ್ದವರು:
 • ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಕೊಚ್ಚಿನ್ ಕನ್ನಡ ಸಂಘದ ಅಧ್ಯಕ್ಷ ಶ್ರೀನಿವಾಸ್, ಬೆಂಗಳೂರು ನಗರ ಘಟಕದ ಪದಾಧಿಕಾರಿಗಳಾದ ನರೇಂದ್ರ ಪಾರೆಕಟ್, ಕೆ.ಎಂ. ಜಿಕ್ರಿಯಾ, ಶಿವರಾಜ್, ಕೆ.ವಿ. ಪರಮೇಶ್, ಕೆ.ಎಸ್.ಸ್ವಾಮಿ, ಬೀದರ್ ಘಟಕದ ಜಿಲ್ಲಾಧ್ಯಕ್ಷ ಡಿ.ಕೆ.ಗಣಪತಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಅಪ್ಪುರಾವ್ ಸೌದಿ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರಾದ ರೋಶಿನಿ ಗೌಡ ಮತ್ತಿತರರು ಭಾಗವಹಿಸಿದ್ದರು.


Post a Comment

0Comments

Post a Comment (0)