ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು :ಡಾ. ಏಕ್‍ರೂಪ್ ಕೌರ್

ವಾರ್ತಾಜಾಲ
By -
0

ಬೆಂಗಳೂರು, ಮಾರ್ಚ್ 15 (ಕರ್ನಾಟಕ ವಾರ್ತೆ): ವ್ಯಾಪಾರ ಹಾಗೂ ಕೌಶಲ್ಯ ಕೇಂದ್ರಿತ ಉದ್ದಿಮೆ ಹಾಗೂ ಇತರೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸರ್ಕಾರದ ಕಾರ್ಯದರ್ಶಿಗಳಾದ ಡಾ. ಏಕ್‍ರೂಪ್ ಕೌರ್ ಅವರು ತಿಳಿಸಿದರು.

ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆ ಸಹಯೋಗದಿಂದ  ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಮಾರ್ಚ್ 15 ರಿಂದ 17 ರವರೆಗೆ ಹಮ್ಮಿಕೊಳ್ಳಲಾದ ಸ್ವಾವಲಂಬನ್ ಮೇಳ- 2024 ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಮಹಿಳೆಯರು ಸ್ವಂತ ಉದ್ಯಮ ಹೊಂದಿ ಮುಖ್ಯವಾಹಿನಿಗೆ ಬರಬೇಕು. ಮಹಿಳೆಯರು  ಸಶಕ್ತರಾಗಲು ಸರ್ಕಾರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಹಿಳೆಯರು ಸರ್ಕಾರದ ವಿವಿಧ ಯೋಜನೆಯ  ಸದುಪಯೋಗಪಡಿಸಿಕೊಳ್ಳಬೇಕು. ಸರ್ಕಾರ ಮಹಿಳೆಯರಿಗೆ ನೀಡುವ ವಿವಿಧ ಸಾಲ ಸೌಲಭ್ಯದ ಕುರಿತು ಮಾಹಿತಿಯನ್ನು ನೀಡಿದರು.

ಮಹಿಳೆಯರು ಶಾಲಾ ಬಸ್ಸು ಮತ್ತು ಕ್ಯಾಬ್‍ಗಳ ಚಾಲನೆಯಲ್ಲಿ ತೊಡಗಿಸಿಕೊಳ್ಳಲು ವಿಪುಲ ಅವಕಾಶವಿದೆ. ಮಹಿಳೆಯರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
 ಕಾರ್ಯಕ್ರಮದಲ್ಲಿ ಸಿಡ್ಬಿ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್.ರಮಣ್ ಮಾತನಾಡಿ, ಪ್ರಾರಂಭದಿಂದ ದೊಡ್ಡ ಮಟ್ಟಕ್ಕೆ ತಲುಪುವವರೆಗೂ ಮಹಿಳಾ ಉದ್ದಿಮೆದಾರರು ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ಮಹಿಳಾ ಉದ್ದಿಮೆದಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರು ಪ್ರಾರಂಭಿಸುವ ಸ್ಟಾರ್ಟ್ ಅಪ್‍ಗಳಿಗೆ ಸಾಲದ ಸೌಲಭ್ಯವನ್ನು ಬ್ಯಾಂಕುಗಳು ನೀಡುತ್ತಿದೆ.

ಬೆಂಗಳೂರು ಇಂದು ಅತಿ ವೇಗವಾಗಿ ಬೆಳೆಯುತ್ತಿದ್ದು, ಮಾಹಿತಿ ತಂತ್ರಜ್ಞಾನ ಬಹು ಮುಖ್ಯ ಪಾತ್ರ ವಹಿಸಿದೆ. ಈಗ ಉದ್ದಿಮೆದಾರರು ತಮ್ಮ ಉತ್ಪನ್ನಗಳನ್ನು ಆನ್‍ಲೈನ್ ಮೂಲಕ ಸಹ ಮಾರಾಟ ಮಾಡಬಹುದಾಗಿದೆ. ಇದರಿಂದ ಹೆಚ್ಚು ಪರಿಶ್ರಮವಿಲ್ಲದೆ ಕಡಿಮೆ ಸಮಯದಲ್ಲಿ ಅಧಿಕ ಲಾಭಗಳಿಸಬಹುದು ಎಂದರು
ಸ್ವಾವಲಂಬನ್ ಮೇಳವು ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ಮಾರ್ಚ್ 15 ರಿಂದ 17 ರವರೆಗೆ ಬೆಳಿಗ್ಗೆ 11 ರಿಂದ ರಾತ್ರಿ 9 ಘಂಟೆಯವರೆಗೆ ನಡೆಯಲಿದೆ.

Post a Comment

0Comments

Post a Comment (0)