ಮುಂದಿನ 20 ವರ್ಷಗಳಲ್ಲಿ ಎಲ್ಲಾ ಇಲಾಖೆಗಳಲ್ಲಿ ಮೀಸಲಾತಿ ಸೌಲಭ್ಯ ಪಡೆದವರೇ ಉನ್ನತ ಸ್ಥಾನಕ್ಕೆ :
ಮೈಸೂರು, ಕಿತ್ತೂರು ಮತ್ತು ಕರಾವಳಿ ಹಿತರಕ್ಷಣಾ ಸಮಿತಿ ಗಂಭೀರ ಆರೋಪ
ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ಐಎಫ್ಎಸ್ ಅಧಿಕಾರಿ ಡಾ. ಗಾ.ನಂ. ಶ್ರೀಕಂಠಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಈ ನಿರ್ಧಾರದಿಂದಾಗಿ ಮುಂದಿನ ಇಪ್ಪತ್ತು ವರ್ಷಗಳಲ್ಲಿ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ 8 ಜಿಲ್ಲೆಗಳಲ್ಲಿರುವವರೇ ಉನ್ನತ ಹುದ್ದೆಗಳಿಗೆ ಏರಲಿದ್ದಾರೆ. ಉಳಿದ ಜಿಲ್ಲೆಗಳ ಜನರಿಗೆ ಭಾರೀ ಅನ್ಯಾಯವಾಗಲಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಒಳಪಡದ ಬಿಡಿಎ, ಬಿಬಿಎಂಪಿ, ಪೊಲೀಸ್ ಠಾಣೆಗಳಲ್ಲೂ ಕಲ್ಯಾಣ ಕರ್ನಾಟಕ ಭಾಗದವರನ್ನು ಮೀಸಲಾತಿ ಅನ್ವಯ ಭರ್ತಿಮಾಡಿಕೊಳ್ಳಲಾಗುತ್ತಿದೆ. ಸಂವಿಧಾನದ ಅನುಚ್ಛೇಧ 371(ಎ) ಅನ್ವಯ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಮೀಸಲಾತಿ ನೀಡಬೇಕಾಗಿದೆ. ಆದರೆ ರಾಜ್ಯ ಸರ್ಕಾರ ಸಂವಿಧಾನದ ಅನುಚ್ಛೇಧ 371(ಎ) ಅಡಿಯಲ್ಲಿ ಅವಕಾಶವಿಲ್ಲದಿದ್ದರೂ, ಅನೇಕ ಆದೇಶಗಳನ್ನು ಹೊರಡಿಸಿ, ರಾಜ್ಯ ಮಟ್ಟದ ವ್ಯಾಪ್ತಿಗೆ ಬಾರದ ಬಿ.ಡಿ.ಎ., ಬಿ.ಬಿ.ಎಂ.ಪಿ., ಬೆಂಗಳೂರಿನ ಇತರೆ ಕಛೇರಿಗಳಲ್ಲಿ ಹಾಗೂ ರಾಜ್ಯ ವ್ಯಾಪ್ತಿಯಲ್ಲಿ ಬರುವ ಹುದ್ದೆಗಳಲ್ಲಿ ಶೇಕಡ 8 ರಷ್ಟು ಮೀಸಲಾತಿ ಕಲ್ಪಿಸಿ, ಇತರೆ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಹೈದರಾಬಾದ್ ಕರ್ನಾಟಕ ಭಾಗದ ಹುದ್ದೆಗಳನ್ನು ತಪ್ಪು ಲೆಕ್ಕ ಹಾಕಿ, ಹೆಚ್ಚು ಹುದ್ದೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಜೊತೆಗೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಹೈದರಾಬಾದ್ ಕರ್ನಾಟಕದ ನೌಕರರನ್ನು ಪರಿಗಣಿಸದೇ ಕೆಲವೇ ನೌಕರರಿಂದ ಮಾತ್ರ ಪರ್ಯಾಯ ಅವಕಾಶ ಪಡೆದು, ಹೈದರಾಬಾದ್ ಕರ್ನಾಟಕದ ಲೆಕ್ಕಕ್ಕೆ ತೆಗೆದುಕೊಂಡು, ಹೈದರಾಬಾದ್ ಕರ್ನಾಟಕ ಭಾಗಕ್ಕೆ ಹೆಚ್ಚು ಖಾಲಿ ಹುದ್ದೆಗಳನ್ನು ತೋರಿಸಲಾಗುತ್ತಿದೆ ಎಂದರು.
ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಂಬಂಧಿಸಿದಂತೆ, ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಒಂದೇ ಬಾರಿಗೆ ಪ್ರತ್ಯೇಕವಾಗಿ (ಇತರೆ ಕರ್ನಾಟಕ ಭಾಗದ ಖಾಲಿ ಹುದ್ದೆಗಳನ್ನು ಹೊರತುಪಡಿಸಿ) ಭರ್ತಿಮಾಡಲಾಗುತ್ತಿದೆ. ಇತರೆ ಕರ್ನಾಟಕ ಭಾಗದ ನೌಕರರನ್ನು ಭರ್ತಿ ಮಾಡದೇ, ಕೇವಲ ಹೈದರಾಬಾದ್ ಕರ್ನಾಟಕ ಭಾಗದ ನೌಕರರನ್ನೇ ಮೊದಲು ಭರ್ತಿ ಮಾಡುತ್ತಿರುವುದರಿಂದ, ಎಲ್ಲಾ ಇಲಾಖೆಗಳಲ್ಲಿ ಹೈದರಾಬಾದ್ ಕರ್ನಾಟಕದ ನೌಕರರೇ ಜೇಷ್ಠತೆಯಲ್ಲಿ ಹಿರಿಯರಾಗಿ ಎಲ್ಲಾ ಉನ್ನತ ಹುದ್ದೆಗಳಿಗೆ ಕೆಲವೇ ವರ್ಷಗಳಲ್ಲಿ ಹೈದರಾಬಾದ್ ಕರ್ನಾಟಕದ ಅಧಿಕಾರಿಗಳೇ ನೇಮಕಗೊಳ್ಳುತ್ತಿದ್ದಾರೆ. ಏಕೆಂದರೆ, ಕ್ಲಾಸ್-1 ಜೂನಿಯರ್ ನಂತರದ ಹುದ್ದೆಗಳಲ್ಲಿ ಹೈದರಾಬಾದ್ ಕರ್ನಾಟಕದ ನೌಕರರ ಜೇಷ್ಠತೆಯನ್ನು ಇತರೆ ಕರ್ನಾಟಕ ನೌಕರರ ಜೊತೆಯಲ್ಲಿ ಸೇರಿಸಿ, ಜೇಷ್ಠತಾ ಪಟ್ಟಿ ತಯಾರಿಸುತ್ತಿರುವುದರಿಂದಲೂ ಅನ್ಯಾಯವಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಗಳಿಗೆ ಹಣಕಾಸು ಇಲಾಖೆಯ ಅನುಮೋದನೆ ಪಡೆಯುವುದರಿಂದ ವಿನಾಯಿತಿ ನೀಡಿದ್ದು, ಇದರಿಂದ ನೇಮಕಾತಿ ಮೇಲೆ ನಿಯಂತ್ರಣ ಇಲ್ಲದಂತಾಗಿದೆ ಎಂದು ವಿಷಾದಿಸಿದರು. ವಿಧಾನಮಂಡಲದಲ್ಲೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂದು ಆ ಭಾಗದ ಪ್ರತಿನಿಧಿಗಳು ಧ್ವನಿ ಎತ್ತುತ್ತಿದ್ದಾರೆ. ಆದರೆ ಉಳಿದ ಜಿಲ್ಲೆಗಳ ಜನಪ್ರತಿನಿಧಿಗಳು ತಮ್ಮ ಭಾಗಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಚಕಾರ ಎತ್ತುತ್ತಿಲ್ಲ. ಈ ಭಾಗದಲ್ಲಿನ ಅನ್ಯಾಯದ ಬಗ್ಗೆ ಯಾವುದೇ ಶಾಸಕರು ಮಾತನಾಡುತ್ತಿಲ್ಲ. ಶಾಸಕಾಂಗ ಈ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ನಾಗರಾಜ್ ಮಾತನಾಡಿ, ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಆದ್ಯತೆ ನೀಡಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ನಿಯಮಗಳನ್ನು ಸರಿಯಾಗಿ ಜಾರಿಗೆ ತರಬೇಕು. ವಿಶೇಷ ಸ್ಥಾನಮಾನ ನೀಡಿದ ನಂತರ ಈ ಭಾಗಕ್ಕೆ ಪ್ರತ್ಯೇಕವಾಗಿ ನೇಮಕಾತಿ ಪ್ರಾಧಿಕಾರ ರಚಿಸಬೇಕು. ನೇಮಕಾತಿ ಮಾಡುವಾಗ ಇಡೀ ರಾಜ್ಯವನ್ನು ಒಂದು ಘಟಕವಾಗಿ ಪರಿಗಣಿಸಿ ನೇಮಕ ಮಾಡಬಾರದು. ಇದರಿಂದ ಉಳಿದ ಜಿಲ್ಲೆಗಳಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು. ಭಂಟ್ಸ್ ಸಂಘದ ಮಾಜಿ ಉಪಾಧ್ಯಕ್ಷ ಉಪೇಂದ್ರ ಶೆಟ್ಟಿ, ಕೆ.ಜಿ.ಐ.ಡಿ ನಿವೃತ್ತ ನಿರ್ದೇಶಕ ಆರ್.ಎಂ. ದೊಡ್ಡಮನಿ, ನಿವೃತ್ತ ಆರ್.ಟಿ.ಒ ಅಧಿಕಾರಿ ಗಂಗಣ್ಣ, ಮೀಸಲಾತಿ ಹೋರಾಟಗಾರರಾದ ಎಂ. ಮಧುಸೂಧನ್, ಜಗದೀಶ್ ಮತ್ತಿತರರು ಉಪಸ್ತಿತರಿದ್ದರು.
0 Comments