ಸರ್ಕಾರಿ ಮತ್ತು ಅರೆ ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳು, ನಿಗಮ ಮಂಡಳಿಗಳ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ.
ಈಗ ಜಾರಿಯಲಿರುವ ಹೊಸ ಪಿಂಚಣಿ ವ್ಯವಸ್ಥೆ ನಿವೃತ್ತ ನೌಕರರಿಗೆ ಮತ್ತು ಅವರ ಕುಟುಂಬದವರಿಗೆ ಯಾವುದೇ ಜೀವನ ಮತ್ತು ಆರ್ಥಿಕ ಭದ್ರತೆ ನೀಡದಿರುವುದರಿಂದ, ನಿವೃತ್ತಿಯ ನಂತರ ಅವರು ಅತಂತ್ರವಾಗುವ ಆತಂಕದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಸರ್ಕಾರ ಆರ್ಥಿಕ ಹೊರೆ ಎನ್ನುವ ಸಬೂಬು ಹೇಳುತ್ತಾ ನಿವೃತ್ತ ನೌಕರರ ಜೀವನವನ್ನು ಅಭದ್ರತೆಗೆ ತಳ್ಳುವುದು ಸರಿಯಲ್ಲ.
ಶಾಸಕರು, ಸಂಸದರು ಮಂತ್ರಿಗಳ ಸಾರಿಗೆ ಸಂಬಳದ ಏರಿಕೆಯ ವಿಚಾರ ಬಂದಾಗ ಯಾವುದೇ ಆರ್ಥಿಕ ಹೊರೆಯ ಬಗ್ಗೆ ಚರ್ಚಿಸದ ಸರ್ಕಾರ, ನೌಕರರ ವಿಚಾರದಲ್ಲಿ ಮೀನಮೇಷ ಎಣಿಸುವುದು, ಕುಂಟು ನೆಪ ಹೇಳುವುದು ಸರಿಯಲ್ಲ.
ಚುನಾವಣೆಯಲ್ಲಿ ಸೋತ ಶಾಸಕ, ಸಂಸದರು ಸದೃಢವಾದ ಪಿಂಚಣಿ ಮತ್ತು ಸೌಲಭ್ಯಗಳನ್ನು ಪಡೆಯಬಹುದಾದರೆ ಸರ್ಕಾರಿ ನೌಕರರಿಗೆ ಈ ಅವಕಾಶ ನೀಡಬಾರದು?
ಈಗಾಗಲೇ ರಾಜಸ್ಥಾನ, ಜಾರ್ಖಂಡ್, ಛತ್ತೀಸ್ಗಡ ಮತ್ತು ಪಂಜಾಬ್ ರಾಜ್ಯಗಳಲ್ಲಿ ಹಳೇ ಪಿಂಚಣಿ ವ್ಯವಸ್ಥೆ ಮರು ಜಾರಿಗೊಳಿಸಲಾಗಿದೆ.
ಅದರಂತೆ ಕರ್ನಾಟಕದಲ್ಲಿಯೂ ಸಹ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಬಿಎಸ್ಪಿ ಆಗ್ರಹಿಸುತ್ತದೆ.
ಈ ಕುರಿತು ಸರ್ಕಾರಿ ನೌಕರರು ಹಮ್ಮಿಕೊಂಡಿರುವ ಹೋರಾಟಕ್ಕೆ ಬಹುಜನ ಸಮಾಜ ಪಾರ್ಟಿ ಸಂಪೂರ್ಣ ಬೆಂಬಲವನ್ನು ನೀಡುತ್ತದೆ.
0 Comments