" ಶ್ರೀ ಮಹಿಪತಿರಾಯರು" (ನವೆಂಬರ್ 23, ಗುರುಗಳ ಆರಾಧನೆಯ ಪ್ರಯುಕ್ತ ಈ ಲೇಖನ)

ಶ್ರೀ ಮಹಿಪತಿರಾಯರು 

ಬೆಳಗಾಂವ ಜಿಲ್ಲೆಗೆ ಸೇರಿದ ಅಥಣಿ ತಾಲ್ಲೂಕಿನ ಐಗಳಿ ಗ್ರಾಮದ ಕುಲಕರ್ಣಿ ಮನೆತನದಲ್ಲಿ , ಶ್ರೀನಿವಾಸನ ಭಕ್ತರಾದ ಕೊನೇರಿರಾಯರ ಪುತ್ರರಾಗಿ ಜನಿಸಿದರು. ಮಹಿಪತಿದಾಸರ ಪೂರ್ವಾಶ್ರಮದ ಹೆಸರು ಗುರುರಾಯರು.

ಇವರು ಮುಂದೆ  ಐಗಳಿ ಬಿಟ್ಟು ವಿಜಾಪುರಕ್ಕೆ ಬಂದರು.  ಒಳ್ಳೆತನ, ವಿದ್ಯೆ, ವಿನಯದ ಪ್ರತಿರೂಪದಂತಿದ್ದ ಗುರುರಾಯನು ಬಿಜಾಪುರದ ಆದಿಲಶಾಹಿ ಸುಲ್ತಾನನ ಹತ್ತಿರವಿದ್ದವರ ಬಳಿ ಕರ್ಣಿಕವೃತ್ತಿಯನ್ನು ಕೈಗೊಂಡರು.  ಕೆಲವೇ ದಿವಸಗಳಲ್ಲಿ ಆತನ ಪ್ರೀತಿಗೆ ಪಾತ್ರನಾದ ಅಲಿ ಆದಿಲಶಹಾ ತನ್ನ ಆಸ್ಥಾನದಲ್ಲಿ ದಿವಾನರನ್ನಾಗಿ ಮಾಡಿದನು.

ಮಹಿಪತಿರಾಯರು ವಿಜಯಪುರ ಆದಿಲಶಾಹಿ ಅರಸರ ಕಾಲದಲ್ಲಿ  ಅರಮನೆಯ ಹತ್ತಿರದ ನರಸಿಂಹ ದೇವಾಲಯದಲ್ಲಿ ಪುರಾಣ ಪ್ರವಚನ ಹೇಳುತ್ತಿದ್ದರು. ಮಹಿಪತಿರಾಯರ ಪಾಂಡಿತ್ಯದ ಪ್ರಖರತೆಯನ್ನು ಖವಾಸಖಾನ ಗುರುತಿಸಿದ. 

 ಇವರು ಚಿಕ್ಕ ವಯಸ್ಸಿನಲ್ಲಿದ್ದಾಗ ಒಬ್ಬರು ಹೇಳಿದ್ದರಂತೆ, ಈ ಬಾಲಕ ಮುಂದೆ ದಿವಾನನೂ ಆಗುತ್ತಾನೆ. ಯೋಗಿಯೂ ಆಗುತ್ತಾನೆ, ಬಹಳಷ್ಟು ಸಾಧನೆಯನ್ನು ಮಾಡುತ್ತಾನೆ ಎಂದು. ಅದರಂತೆ ಮುಂದೆ ಇವರಿಗೆ  ದಿವಾನ ಹುದ್ದೆ ಒಲಿದಿತ್ತು. ಇವರೊಮ್ಮೆ ದಾರಿಯಲ್ಲಿ ಸಾಗುವಾಗ ಇಬ್ಬರು ಎದುರಾಗಿ , ದಿವಾನರಾಗಿದ್ದ ಇವರ ಕೈಯ್ಯಲ್ಲಿನ ರಾಜಮುದ್ರೆಯುಂಗರ ಅವರ ಹತ್ತಿರವೇ ತೆಗೆದುಕೊಂಡು ಅದನ್ನು ಅವರ ಕಣ್ಣೆದುರೇ ಬಾವಿಗೆ ಎಸೆದಾಗ ಇವರು ಗಾಬರಿಯಾಗಿದ್ದುಂಟು. ಆಗ ಷಾನುಂಗ ಷಾನುಂಗಿಯರು ಬಾವಿಯಿಂದ ಒಂದು ಉಂಗುರ ತೆಗೆಯದೇ ಅಂತಹುದೇ ಬಹಳಷ್ಟು ಉಂಗುರ ತೆಗೆದು ಕೊಟ್ಟಾಗ ಇವರು ಕಕ್ಕಾಬಿಕ್ಕಿಯಾಗಿ ನೋಡಿದ್ದರು. ನಂತರ ಇವರ ಉಂಗುರವನ್ನೂ ಮರಳಿಸಿದರು. ಅವರಿಬ್ಬರೂ ಭಾಸ್ಕರಸ್ವಾಮಿಗಳನ್ನು ದರುಶನ ಮಾಡುವಂತೆ ತಿಳಿಸಿದರು.   ಷಾನುಂಗಿ, ಷಾನುಂಗರ ಭೇಟಿ ಇವರ ಜೀವನದಲ್ಲಿ ಒಂದು ತಿರುವು ತಂದಿತು. ಅಂದರೆ ಅವರು  ಸಾರವಾಡದ ಭಾಸ್ಕರ ಸ್ವಾಮಿಗಳ ದರ್ಶನ ಮಾಡಲು ತಿಳಿಸಿದರು.   ಸೂಚನೆ ನೀಡಿದ ಮೇಲೆ ದಂಪತಿಗಳು ಸಾರವಾಡಕ್ಕೆ ಹೋಗಿ ಭಾಸ್ಕರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸಾಧನೆ ಮಾಡುತ್ತಿದ್ದರು.  ಭಾಸ್ಕರ ಸ್ವಾಮಿಗಳು ಪಾರಮಾರ್ಥಿಕ ಬದುಕಿನ ಮಾಗ೯ ತೋರಿದರು. ಗುರುಪದೇಶವಾದ ಮೇಲೆ ದಿವಾನ ಪದವಿ ತ್ಯಜಿಸಿದರು. ಸಂಪತ್ತನ್ನೆಲ್ಲಾ ದಾನಮಾಡಿದರು. ಶ್ರೀ ಹರಿಯನ್ನು ಕಾಣುವ ಅಪರೋಕ್ಷತೆಯ ಬದುಕಿಗೆ ತಮ್ಮನ್ನು ಒಗ್ಗಿಸಿಕೊಂಡರು. ಬದುಕಿನ ಉಳಿದ ಕಾಲವನ್ನು ಕಾಖಂಡಿಕಿಯಲ್ಲಿಯೇ ಅನುಷ್ಠಾನ ಗೈಯುತ್ತ ಕಳೆದರು. ಅಪರೋಕ್ಷ ಜ್ಞಾನಿಗಳೆನಿಸಿಕೊಂಡರು. ಇತ್ತ ಸುಲ್ತಾನನು ಎಷ್ಟು ಕರೆ ಕಳಿಸಿದರೂ ವಿಜಾಪುರಕ್ಕೆ ಗುರುರಾಯ ಬರಲಿಲ್ಲ.  ದಾಸಸಾಹಿತ್ಯಕ್ಕೆ ಮಹಿಪತಿದಾಸರ ಕೊಡುಗೆ ಅನನ್ಯ. ಆರುನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಮಾಜದ ಅಂಕುಡೊಂಕನ್ನು ತಿದ್ದಿದರು.  ಕಾಲಪಕ್ವವಾದ ಮೇಲೆ, ಭಾಸ್ಕರಸ್ವಾಮಿಗಳ ಅಪ್ಪಣೆಯು ತಾನಾಗಿಯೇ ಆದಾಗ ವಿಜಾಪುರಕ್ಕೆ ಬಂದು ಜನಸಾಮಾನ್ಯರ ಮಧ್ಯದಲ್ಲಿ ನೆಲೆಸಿ ನಡೆನುಡಿಯೊಂದಾಗಿ ಕೀರ್ತನೆಗಳನ್ನೂ ಹಾಡಿ ಆಧ್ಯಾತ್ಮದ ಬೆಳಕನ್ನು ಎಲ್ಲೆಡೆಗೂ ಪಸರಿಸಿದನು. ಹೀಗೆ ಭಾಸ್ಕರ ಸ್ವಾಮಿಗಳ ದರ್ಶನದಿಂದ , ಅವರ ಮಾರ್ಗದರ್ಶನದಿಂದ ಆಧ್ಯಾತ್ಮದ ನೆಲೆ ಸ್ಪಷ್ಟವಾಯಿತು., “ಇಂದೆನ್ನ ಜನ್ಮ ಪಾವನವಾಯಿತು. ತಂದೆ ಶ್ರೀ ಗುರುಗಳ ಚರಣ ದರುಶನದಿಂದ” ಎಂಬ ಮೊದಲ ಕೀರ್ತನೆಯನ್ನು ದಾಸರಾಗಿ ಹಾಡಿದರು. ಅಂದಿನಿಂದ 'ಮಹಿಪತಿ' ಎಂಬ ಅಂಕಿತದಿಂದ ನೂರಾರು ರಚನೆಗಳನ್ನು ಮಾಡಿ ತಮ್ಮ ಅನುಭವವನ್ನು ಸಾರ್ವಜನಿಕಗೊಳಿಸಿದರು. ಸಾಮಾನ್ಯವಾಗಿ ದಾಸ ಪರಂಪರೆಯಲ್ಲಿ ಹರಿದಾಸರಿಗೆ 'ವಿಟ್ಠಲ' ಎಂಬುದು ಅಂಕಿತದಲ್ಲಿ ಸೇರಿರುತ್ತದೆ. ಆದರೆ ಸಂನ್ಯಾಸಿಗಳಾಗಿದ್ದು ಹರಿದಾಸ ಸಾಹಿತ್ಯ ರಚನೆಯನ್ನು ಮಾಡಿದ ವ್ಯಾಸರಾಯರು, ರಾಘವೇಂದ್ರರಾಯರು, ಶ್ರೀಕೃಷ್ಣ, ವೇಣುಗೋಪಾಲ ಎಂದು ಅನುಕ್ರಮವಾಗಿ ಅಂಕಿತಗಳನ್ನು ಇಟ್ಟುಕೊಂಡವರು. ಅದೇ ಕ್ರಮದಲ್ಲಿ ಮಹಿಪತಿದಾಸರು ಬಂದಿರಬಹುದಾಗಿರುವುದರಿಂದ ಇವರ ಅಂಕಿತವು 'ಮಹಿಪತಿ' ಎಂದೇ ಇರುವುದನ್ನು ಗಮನಿಸಬಹುದು. 

ಏಕೆಂದರೆ ಮಹಿಪತಿ ದಾಸರು ಇಹಲೋಕವನ್ನು ಕೃಷ್ಣಾತೀರದಲ್ಲಿಯ ಕೋಲ್ಹಾರದಲ್ಲಿ ತ್ಯಜಿಸಿದಾಗ ಅಲ್ಲೊಂದು ವೃಂದಾವನವನ್ನು ಕಟ್ಟಲಾಗಿರುವುದೆಂದು ತಿಳಿದು ಬರುತ್ತದೆ. ಅದರಂತೆ ಅವರ ವೃಂದಾವನವನ್ನು ಕಾಖಂಡಕಿಯಲ್ಲಿಯೂ ಇದೆ. ಗುರುರಾಯರು ಹರಿದಾಸರಾಗದೆ ಬಿಡಿಸಂನ್ಯಾಸಿಯ ಆಶ್ರಮವನ್ನು ತೆಗೆದುಕೊಂಡು ಮಹಿಪತಿರಾಯರೆಂದೇ ಖ್ಯಾತಿ ಪಡೆದರೆಂದು ನಂಬಬೇಕು. ಅಂತೆಯೇ ಶ್ರೀಪಾದರಾಯರು, ವ್ಯಾಸರಾಯರು, ವಾದಿರಾಜರು, ರಾಘವೇಂದ್ರರಾಯರಿಗೆ ವೃಂದಾವನಗಳಿರುವಂತೆ ಇವರಿಗೂ ವೃಂದಾವನವು

ಸಂಭವಿಸಿತು. ಕೇವಲ ಹರಿದಾಸರಾಗಿದ್ದರೆ ವೃಂದಾವನವು ಇರುತ್ತಿರಲಿಲ್ಲ. ಇವರು ಸುಮಾರು ೬೮೫ ಕನ್ನಡ ಕೃತಿಗಳನ್ನು,  ಮರಾಠಿ , ಹಿಂದಿ ಕೃತಿ, ಮಿಶ್ರ ಕೃತಿಗಳನ್ನು ರಚನೆ ಮಾಡಿ ದಾಸಸಾಹಿತ್ಯದಲ್ಲಿ ವೈಶಿಷ್ಟ್ಯ ಪೂರ್ಣವಾದ ಸ್ಥಾನವನ್ನು ಗಳಿಸಿದ್ದಾರೆ. ಕನ್ನಡದ ಕೃತಿಗಳಲ್ಲಿ ಹರಿಗುರುಗಳ ಮಹಿಮೆ,  ಸಾಕ್ಷಾತ್ಕಾರ, ಸ್ವಾನುಭವ, ದ್ವೈತ ಮತವನ್ನು ಕುರಿತು, ಇತರ ಸಂಕೀರ್ಣ ವಿಷಯಗಳನ್ನು ಕುರಿತು ರಚನೆ ಮಾಡಿದುವುಗಳಾಗಿವೆ. ಮಹಿಪತಿರಾಯರು ಕೃತಿಗಳನ್ನು ರಚನೆ ಮಾಡಿದ ಕಾಲವಾದರೋ ಹರಿದಾಸ ಸಾಹಿತ್ಯದ ಇತಿಹಾಸದಲ್ಲಿ ಅತ್ಯಂತ ಸಂದಿಗ್ಧವಾದುದು. ಏಕೆಂದರೆ ಆತ್ತ ಪುರಂದರದಾಸರ ಕಾಲ ಮುಗಿದು ಇತ್ತ ಇನ್ನೂ, ವಿಜಯದಾಸರ ಕಾಲ ಆರಂಭವಾದ ಅವಧಿಯದು. ಈ ಸಂದರ್ಭದಲ್ಲಿ ದಾಸಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಸ್ಥಾನ ಪಡೆದವರು. ಮಹಿಪತಿರಾಯರ ಕೃತಿಗಳಲ್ಲಿ ಬಹಳಷ್ಟು ಸ್ವಾನುಭವಸಿದ್ಧಿಯನ್ನು, ಕನ್ನಡ ನುಡಿಯಲ್ಲಿ ಅನಾಯಾಸವಾಗಿ ನಿರೂಪಿಸಬಲ್ಲ ಶಕ್ತಿಯನ್ನು, ಅಧ್ಯಾತ್ಮ ದ ವಿಷಯಗಳು ಸೋಜಿಗಗೊಳಿಸುತ್ತವೆ. ಮಹಿಪತಿರಾಯರ ಮತ್ತೊಂದು ವೈಶಿಷ್ಟ್ಯವೆಂದರೆ ಅವರು ಭಾಷೆಯನ್ನು ದುಡಿಸಿಕೊಂಡ ಪರಿ ಅನನ್ಯವಾದುದು. ಅವರು ಆಡು ಭಾಷೆಯಲ್ಲಿಯೂ ಮನಸ್ಸನ್ನು ಸೆಳೆಯುತ್ತಾರೆ. ಇವರು ಬಳಸಿಕೊಂಡಿರುವ ಜಾನಪದ ಧಾಟಿಯಂತೂ ಜನಪದವನ್ನೇ ಆಕರ್ಷಿಸುತ್ತದೆ. ಹೀಗೆ ಕಾಖಂಡಕೀ ದಾಸರೆಂದೇ ಹೆಸರು ಪಡೆದ ಮಹಿಪತಿರಾಯರು ತಮ್ಮ ಬದುಕು ಮತ್ತು ಸಾಹಿತ್ಯ ಕೃತಿಗಳಿಂದ ವೈಶಿಷ್ಟ್ಯಪೂರ್ಣರು.  ಲೇ

ಖನ: ಡಾ.ವಿದ್ಯಾಶ್ರೀ ಕುಲಕರ್ಣಿ ಮಾನವಿ

ಕನ್ನಡ ಅಧ್ಯಾಪಕಿ ಪೂರ್ಣಪ್ರಮತಿ ಬೆಂಗಳೂರು

Post a Comment

0 Comments