ನ್ಯಾ. ಎಚ್‌.ಸಿ.ಸಂದೇಶ್‌ಗೆ ಆಮ್‌ ಆದ್ಮಿ ಪಾರ್ಟಿ ಬೆಂಬಲ

ಎಸಿಬಿಯ ಭ್ರಷ್ಟಾಚಾರವನ್ನು ತರಾಟೆಗೆ ತೆಗೆದುಕೊಂಡು ಬೆದರಿಕೆ ಎದರಿಸುತ್ತಿರುವ ನ್ಯಾ. ಎಚ್‌.ಸಿ.ಸಂದೇಶ್‌ರವರನ್ನು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಾನೂನು ಘಟಕ ಭೇಟಿ ಮಾಡಿ, ನೈತಿಕ ಬೆಂಬಲ ಘೋಷಿಸಿತು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, “ಹೈಕೋರ್ಟ್‌ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಘಟನೆ ನಡೆದಿರುವುದು ಅತ್ಯಂತ ಆಘಾತಕಾರಿ ಬೆಳವಣಿಗೆ. ಭ್ರಷ್ಟ ಬಿಜೆಪಿಯ 40% ಸರ್ಕಾರವು ಉಚ್ಚನ್ಯಾಯಾಲಯವನ್ನೂ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಅವ್ಯಾಹತವಾಗಿ ಅಕ್ರಮ ನಡೆಸಲು ಯತ್ನಿಸುತ್ತಿದೆ. ನ್ಯಾಯಾಧೀಶರ ಮೇಲೆ ಒತ್ತಡ ಹಾಕುವ ಮೂಲಕ ಸಂವಿಧಾನದ ಆಶಯವನ್ನು ಬುಡಮೇಲು ಮಾಡುತ್ತಿದೆ. ಸರ್ಕಾರದ ಕುತಂತ್ರಕ್ಕೆ ಮಣಿಯದ ನ್ಯಾ. ಎಚ್‌.ಸಿ.ಸಂದೇಶ್‌ರವರಿಗೆ ಪಕ್ಷವು ನೈತಿಕ ಬೆಂಬಲ ನೀಡುತ್ತಿದೆ” ಎಂದು ಹೇಳಿದರು.

ಪಕ್ಷದ ಕಾನೂನು ಘಟಕದ ಮುಖಂಡರಾದ ಲಕ್ಷ್ಮೀಕಾಂತ್‌ ರಾವ್‌ ಮಾತನಾಡಿ, “ಜನರನ್ನು ಹಾಗೂ ಜನರ ತೆರಿಗೆ ಹಣವನ್ನು ರಕ್ಷಿಸಬೇಕಾದ ಎಸಿಬಿಯು ಕಳಂಕಿತರನ್ನು ರಕ್ಷಿಸುತ್ತಿದೆ. ಬಳ್ಳಾರಿಯಲ್ಲಿ ಗಣಿ ಅಕ್ರಮಗಳಿಗೆ ಸಹಕರಿಸಿದ ಗುರುತರ ಆರೋಪ ಹೊತ್ತಿರುವ ಸೀಮಂತ್‌ ಕುಮಾರ್‌ ಸಿಂಗ್‌ರವರು ಎಸಿಬಿಯ ಎಡಿಜಿಬಿ ಆಗಿರುವುದು ನಾಡಿನ ದುರಾದೃಷ್ಟ. ಬೇಲಿಯೇ ಎದ್ದು ಹೊಲ ಮೇಯಿತು ಎಂಬ ಗಾದೆಯಂತೆ, ಭ್ರಷ್ಟರ ನೇತೃತ್ವದಲ್ಲಿ ಎಸಿಬಿಯೇ ಭ್ರಷ್ಟಾಚಾರದಲ್ಲಿ ಮುಳುಗಿದೆ” ಎಂದು ಹೇಳಿದರು.

ಮಾಜಿ ಕೆಎಎಸ್‌ ಅಧಿಕಾರಿ ಹಾಗೂ ಎಎಪಿ ರಾಜ್ಯ ವಕ್ತಾರರಾದ ಕೆ.ಮಥಾಯಿಯವರು ಮಾತನಾಡಿ, “ನ್ಯಾ. ಎಚ್‌.ಸಿ.ಸಂದೇಶ್‌ರವರು ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿ, ಈ ಕುರಿತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಎಸಿಬಿ ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಹಾಗೂ ಪೊಲೀಸ್‌ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್‌ ಪೌಲ್‌ ವಿರುದ್ಧದ ಆರೋಪಗಳಲ್ಲಿ ಸಚಿವ ಅಶ್ವತ್ಥ್‌ ನಾರಾಯಣ್‌, ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಸರು ಕೇಳಿಬರುತ್ತಿದೆ. ಇವರಿಬ್ಬರನ್ನು ವಿಚಾರಣೆ ನಡೆಸಿದಾಗ ಮಾತ್ರ ಅಕ್ರಮಗಳು ಸಂಪೂರ್ಣವಾಗಿ ಬಯಲಾಗಲಿವೆ” ಎಂದು ಹೇಳಿದರು.

“ಅಮ್ರಿತ್‌ ಪೌಲ್‌ರವರ ಅಧಿಕಾರಾವಧಿಯಲ್ಲಿ ನಡೆದ ಸೀನ್‌ ಆಫ್‌ ಕ್ರೈಮ್‌ ಆಫೀಸರ್‌ಗಳ ನೇಮಕಾತಿ ಪ್ರಕ್ರಿಯೆಯಲ್ಲೂ ಭಾರೀ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಅವರ ಅಧಿಕಾರಾವಧಿಯಲ್ಲಿ ನಡೆದ ಎಲ್ಲ ನೇಮಕಾತಿ ಪ್ರಕ್ರಿಯೆಗಳ ಸಮಗ್ರ ತನಿಖೆಯಾಗಬೇಕು” ಎಂದು ಕೆ.ಮಥಾಯಿ ಆಗ್ರಹಿಸಿದರು.

ಆಮ್‌ ಆದ್ಮಿ ಪಾರ್ಟಿ  ಬೆಂಗಳೂರು ಕಾನೂನು ಘಟಕದ ಅಧ್ಯಕ್ಷ  ಮಂಜುನಾಥ ಸ್ವಾಮಿ , ರವಿಚಂದ್ರ ನೆರಬಿಂಚಿ,  ಗಂಗಾಧರ್ ಮತ್ತಿತರ ಕಾನೂನು ಘಟಕದ ಸದಸ್ಯರುಗಳು ಭಾಗವಹಿಸಿದ್ದರು.

 

Post a Comment

0 Comments